ವೀಣೆ ಸುಬ್ಬಣ್ಣ
	ಸು. 1858-1938. ಮೈಸೂರಿನ ಖ್ಯಾತ ವೈಣಿಕರಲ್ಲಿ ಒಬ್ಬರು. ಪ್ರಸಿದ್ಧ ವೈಣಿಕ ಕುಟುಂಬದಲ್ಲಿ ಜನಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನವಿದ್ವಾಂಸರಾಗಿದ್ದ ವೀಣೆ ವೆಂಕಟಸುಬ್ಬಯ್ಯ ನವರು ಇವರ ತಾತ; ಸ್ವತಃ ವೀಣೆ ಮತ್ತು ಸಂಗೀತದಲ್ಲಿ ಪ್ರವೀಣರಾಗಿದ್ದ ದೊಡ್ಡ ಶೇಷಣ್ಣನವರು ಇವರ ತಂದೆ. ಸುಬ್ಬಣ್ಣನವರು ವೀಣಾವಾದನವನ್ನು ತಮ್ಮ ತಂದೆಯಿಂದ ಕಲಿತರು. ಸಂಗೀತಾಭ್ಯಾಸವನ್ನು ಪ್ರಸಿದ್ಧ ವಾಗ್ಗೇಯಕಾರರಾದ ಮೈಸೂರು ಸದಾಶಿವರಾಯರಲ್ಲಿ ನಡೆಸಿದರು. ಆ ಸಂದರ್ಭದಲ್ಲಿ ಸಮೀಪದ ಬಂಧುಗಳಾದ ವೀಣೆ ಶೇಷಣ್ಣನವರು ಇವರ ಸಹಪಾಠಿಗಳಾಗಿದ್ದರು. ಚಾಮರಾಜ ಒಡೆಯರು ಇವರ ಬಾಲ್ಯಸ್ನೇಹಿ ತರು ಮತ್ತು ಸಹಪಾಠಿಗಳು.

	ವೀಣಾವಾದನ ಮತ್ತು ಸಂಗೀತದಲ್ಲಿ ವಿದ್ವತ್ತನ್ನು ಗಳಿಸಿದ ಅನಂತರ ಇವರು ದೇಶಪರ್ಯಟನೆ ಮಾಡಿ ಅನೇಕ ಕಡೆಗಳಲ್ಲಿ ಕಚೇರಿಗಳನ್ನು ನಡೆಸಿದರು. ಇವರು ಕೆಲವೊಮ್ಮೆ ವೀಣೆ ಶೇಷಣ್ಣನವರೊಡನೆಯೂ ಕಚೇರಿಗಳನ್ನು ನಡೆಸಿದ್ದುಂಟು. ಅನಂತರ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವೀಣಾವಿದ್ವಾಂಸರಾದರು. ಇವರಿಗೆ ಶಂಕರಾಭರಣ, ಕಲ್ಯಾಣಿ, ಕಾಂಭೋಜಿ, ಕೇದಾರಗೌಳ ಮುಂತಾದ ರಾಗಗಳಲ್ಲಿ ಅಪಾರ ಪರಿಶ್ರಮ ವಿತ್ತು. ಇವರು ಉತ್ತಮ ವಾಗ್ಗೇಯಕಾರರೂ ಆಗಿದ್ದರು. ಧರ್ಮಾವತಿ, ಋಷಭಪ್ರಿಯ, ಧೇನುಕ ಮುಂತಾದ ರಾಗಗಳಲ್ಲಿ ಇವರು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಕಂಠೀರವ ನರಸರಾಜ ಒಡೆಯರ ವಿವಾಹ ಸಂದರ್ಭದಲ್ಲಿ ಇವರು ರಚಿಸಿದ ನವರಾಗ ಮಾಲಿಕೆ ಪ್ರಸಿದ್ಧವಾದುದು. ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆಯೂ ಅಪಾರ ಒಲವಿತ್ತು. ಇವರಿಗೆ ಅನೇಕ ಬಿರುದುಗಳು ಲಭಿಸಿವೆ. ಇವುಗಳಲ್ಲಿ ವೈಣಿಕವರಕೇಸರಿ, ವೈಣಿಕಚೂಡಾಮಣಿ, ವೈಣಿಕಪ್ರವೀಣ ಮುಖ್ಯವಾದುವು. 

	ಇವರ ಶಿಷ್ಯ ಸಂಪತ್ತು ಅಪಾರವಾದುದು. ಚಿಕ್ಕರಾಮರಾಯ, ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್, ಆರ್.ಎಸ್. ಕೇಶವಮೂರ್ತಿ, ವಿ. ಶ್ರೀಕಂಠಅಯ್ಯರ್, ಸ್ವರಮೂರ್ತಿ ವೆಂಕಟನಾರಾಯಣರಾವ್, ವಿದುಷಿ ಸುಬ್ಬಮ್ಮ ಈ ಮೊದಲಾದವರು ಇವರಲ್ಲಿ ವೀಣಾಭ್ಯಾಸ ನಡೆಸಿದವರು.

	ಇವರು 1938ರಲ್ಲಿ ನಿಧನರಾದರು. ಇವರು ನುಡಿಸುತ್ತಿದ್ದ ವೀಣೆ ಇವರ ಶಿಷ್ಯರಲ್ಲೊಬ್ಬರಾದ ಆರ್.ಎಸ್. ಕೇಶವಮೂರ್ತಿಯವರ ಬಳಿ ಇದೆ.						
		(ಆರ್.ಎಸ್.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ